RSS

Category Archives: ಚನ್ನವೀರ ಕಣವಿ

ಬಾ ಮಲ್ಲಿಗೆ ಬಾ ಮೆಲ್ಲಗೆ / Baa mallige baa mellage

click to play

ಬಾ ಮಲ್ಲಿಗೆ ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ ಬೆಳುದಿಂಗಳು
ನಮ್ಮೊಲುಮೆಯ ಕರೆಗೆ ।।

ಚೆಲುವಾಗಿದೆ ಬನವೆಲ್ಲವೂ
ಗೆಲುವಾಗಿದೆ ಮನವು
ಉಸಿರುಸಿರಿಗು ತಂಪೆರಚಿದೆ
ನಿನ್ನೆದೆ ಪರಿಮಳವು ।।

ತಿಂಗಳ ತನಿ ಬೆಳಕಲಿ
ಮೈದೊಳೆದಿಹ ಮನದನ್ನೆ
ಮಂಗಳವೀ ಮನೆಯಂಗಳ
ಚೆಂಗಲವೆಯ ಚೆನ್ನೆ ||ಬಾ ಮಲ್ಲಿಗೆ||

ಹಿತವಾಗಿದೆ ಮೆಲ್ಲಲರುಲಿ
ಮಿತವಾಗಿದೆ ಮೌನ
ಜತೆಗೂಡುತ ಮಾತಾಡಿವೆ
ಅರೆ ನಿದ್ರೆಯೊಳೇನ ।।

ಲೋಕದ ಮೈ ನೋವಿಗೆ
ಶ್ರೀಗಂಧದ ತನಿಲೇಪ
ಆಕಾಶದ ಗುಡಿಯಿಂದಲಿ
ಹೊರಸೂಸಿದ ಧೂಪ ||ಬಾ ಮಲ್ಲಿಗೆ||

ಒಳಿತೆಲ್ಲವೂ ಬೆಳಕಾಯಿತು
ಬಾನ್ಗರೆಯಿತು ಜೇನು
ಆನಂದದ ಕಡಲಾಳದಿ
ನಾವಾದೆವೆ ಮೀನು ।।

ಎವೆಯಿಕ್ಕದೆ ಮಿನುಗುತ್ತಿದೆ
ಚಿಕ್ಕೆಯ ಹನಿ ದೀಪ
ತಮ್ಮಷ್ಟಕ್ಕೆ **ಧ್ಯಾನಿಸುತ್ತಿವೆ
ಯಾವುದು ಸವಿನೆನಪ ||ಬಾ ಮಲ್ಲಿಗೆ||

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಸಿ ಅಶ್ವಥ್
ಗಾಯನ – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್

download baa mallige baa mellage

 

ಟ್ಯಾಗ್ ಗಳು: , , , , , , ,

ವಿಶ್ವ ವಿನೂತನ ವಿದ್ಯಾ ಚೇತನ‌ / vishwa vinootana vidya chethana

click to play

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।

ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುoಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ || ವಿಶ್ವ ।।

ಗoಗ ಕದoಬ ರಾಷ್ಟ್ರ‌ಕೂಟ ಬಲ
ಚಾಲುಕ್ಯ ಹೊಯ್ಸಳ‌ ಬಲ್ಲಾಳ‌
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ || ವಿಶ್ವ ।।

ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುoದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ || ವಿಶ್ವ ।।

ಅರಿವೆ ಗುರುನುಡಿ ಜ್ಯೋತಿರ್ಲಿoಗ
ದಯವೇ ಧರ್ಮದ ಮೂಲ ತರoಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ || ವಿಶ್ವ ।।

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಎಚ್. ಕೆ. ನಾರಾಯಣ್
ಗಾಯನ – ಸಮೂಹ

download vishwa vinootana vidya chethana

 

ಟ್ಯಾಗ್ ಗಳು: , , , , , , ,

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ / elenna manadanne

click to play

ಏಳೆನ್ನ ಮನದನ್ನೆ ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ ಉಷೆಯ ಗೆಳತಿ
ಏಳು ಮುತ್ತಿನ ಚೆಂಡೆ ಏಳು ಮಲ್ಲಿಗೆ ದಂಡೆ
ಏಳು ಬಣ್ಣದ ಬಿಲ್ಲೆ ಮಾಟಗಾತಿ

ಏಳೆನ್ನ ಕಲ್ಯಾಣಿ ಏಳು ಭಾವದರಾಣಿ
ನೋಡು ಮೂಡಲದಲ್ಲಿ ರಾಗಮಿಲನ
ಮರದುದೆಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿ ಬಟ್ಟೆಯಲದರ ಚಲನ ವಲನ || ಏಳೆನ್ನ ||

ಮಂಜಿನರಳೆಯ ಹಿಂಜಿ ತೂರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು ಏಳೆನ್ನ ಹೊಂಗೆಳತಿ
ಮೊಗದ ಜವನಿಕೆ ತೆರೆದು ನಗೆಯ ನೀಡು || ಏಳೆನ್ನ ||

ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತುಬಿಡುವೆ || ಏಳೆನ್ನ ||

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ?
ಗಾಯನ – GV ಅತ್ರಿ

download elenna manadanne

 

ಟ್ಯಾಗ್ ಗಳು: , , , , ,

ಹೂವು ಹೊರಳುವವು ಸೂರ್ಯನ ಕಡೆಗೆ / hoovu horaluvavu

click to play

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ.

ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು;
ಅದಕೆ ಅದರ ಗುಣದೋಷಗಳ೦ಟಿಸಿ
ಬಿಡಿಸಿ ಬಿಟ್ಟ ತೊಡಕು.

ಗಿಡದಿಂದುರುವ ಎಲೆಗಳಿಗೂ ಮುದ,
ಚಿಗುರುವಾಗಲೂ ಒಂದೇ ಹದ,
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ !

ಬಿಸಿಲ ಧಗೆಯ ಬಸಿರಿನಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ;
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾ ಗಳಿಗೆ.

ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ;
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಹೆಚ್.ಎಸ್.ವೆಂಕಟೇಶ ಮೂರ್ತಿ
ಗಾಯನ – ರತ್ನಮಾಲ ಪ್ರಕಾಶ್

download hoovu horaluvavu

 

ಟ್ಯಾಗ್ ಗಳು: , , , , ,

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ / Ondu munjavinali

click to play

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವೆನೆ ಸೋಸಿಪಹ ಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತಿತ್ತು || ಒಂದು ಮುಂಜಾವಿನಲಿ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ಮುಂಜಾವಿನಲಿ ||

ತಳಿರತೋರಣದಲ್ಲಿ ಬಳ್ಳಿಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತಿತ್ತು || ಒಂದು ಮುಂಜಾವಿನಲಿ ||

ಉಷೆಯ ನುಣ್ಗದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದಮನ
ಮುಂಬಾಳ ಸವಿಗನಸ ನೆನೆಯುತಿತ್ತು || ಒಂದು ಮುಂಜಾವಿನಲಿ ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ___ ||

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download ondu munjavinali

 

ಟ್ಯಾಗ್ ಗಳು: , , , , ,