RSS

Category Archives: ಜಿ. ಎಸ್. ಶಿವರುದ್ರಪ್ಪ

ಇದಾವ ರಾಗ ಮತ್ತೆ / idaava raaga mathe

click to play

[audio http://cl.ly/040R0g1L1I2t/idaava_raaga.mp3]

ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿಂದೆದ್ದು ನಭನೀಲಿಗೇರುತಿದೆ

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ಬಯಲಿನಲಿ ಮೋಡಗಳ ಕವಿಸುತಿದೆ ।। ಇದಾವ ।।

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ ।। ಇದಾವ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download idaava raaga mathe

 

 

ಟ್ಯಾಗ್ ಗಳು: , , , , ,

ಸಂಜೆ ಬಾನಿನಂಚಿನಲ್ಲಿ / sanje baaninanchinalli

click to play

[audio http://cl.ly/251m0Q2N1400/sanje_baaninalli.mp3]

ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ ।। ಸಂಜೆ ।।

ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು ।। ಸಂಜೆ ।।

ಅಸಹಾಯಕ ತಾರೆಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ ।। ಸಂಜೆ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್

download sanje baaninanchinalli

 

ಟ್ಯಾಗ್ ಗಳು: , , , , ,

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು / mungaarina abhishekake miduvaayitu nelavu

click to play

ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು ।। ಮುಂಗಾರಿನ ।।

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯಂತ ಹಸಿರು ।। ಮುಂಗಾರಿನ ।।

ಮೈ ಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ
ಕನಸಿನ ಹೂ ಅರಳುವ ಕಂಪು ।। ಮುಂಗಾರಿನ ।।

ಭರವೆಸಗಳ ಹೊಲಗಳಲ್ಲಿ
ನೇಗಿಲ ಗೆರೆ ಕವನ
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ ।। ಮುಂಗಾರಿನ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ಬಿ ಆರ್ ಛಾಯಾ

download mungaarina abhishekake miduvaayitu nelavu

 

ಟ್ಯಾಗ್ ಗಳು: , , , , , , , ,

ಒಂದೇ ವೃಕ್ಷದ ಕೊಂಬೆಗಳು / onde vrukshada kombegalu

click to play

ಒಂದೇ ವೃಕ್ಷದ ಕೊಂಬೆಗಳು
ನಾವೊಂದೇ ಬಳ್ಳಿಯ ಹೂವುಗಳು
ಒಂದೇ ನೆಲದೊಳು ಬೇರೂರುತ
ನಾವೊಂದೇ ಮುಗಿಲಿಗೆ ನೆಗೆವವರು

ಒಂದೆ ವಸಂತದ ಸ್ಪರ್ಶಕೆ ಝಗ್ಗನೆ
ಚಿಗುರುತ ಎದೆಯನು ತೆರೆದವರು
ಹಳೆಯ ನೆನಪುಗಳನೊಂದೇ ಗಾಳಿಗೆ
ತೂರುತ ಭರವಸೆಗೊಲಿದವರು

ಹಣ್ಣು-ಕಾಯ್ಗಳಲಿ ನಾಳಿನ ಕನಸಿನ
ಬೀಜವ ಹುದುಗಿಸಿ ಇಟ್ಟವರು
ಕೊಂಬೆ ಕೊಂಬೆಯಲಿ ಹಾಡುವ ಹಕ್ಕಿಯ
ರಾಗಕೆ ಮನಸನು ಕೊಟ್ಟವರು

ಹಗಲಿರುಳಿನ ಋತುಮಾನದ ಗತಿಯೊಳು
ಮರಳಿ ಮರಳಿ ಹೊಸತಾಗುವರು
ಹಿಂದು-ಮುಂದುಗಳನೊಂದೇ ಕೇಂದ್ರಕೆ
ತಂದುಕೊಂಡು ನೆಲೆ ನಿಂತವರು

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲಾ ಪ್ರಕಾಶ್ / ಮಾಲತಿ ಶರ್ಮ

download onde vrukshada kombegalu

 

ಟ್ಯಾಗ್ ಗಳು: , , , , , , ,

ಎಲ್ಲೋ ದೂರದಿ ಜಿನುಗುವ ಹನಿಗಳೆ / ello dooradi jinuguva hanigale

click to play audio

ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆ ಕೆರೆ
ಹೊಸ ಹಸುರೇಳಲಿ ನವುರಾಗಿ || ಎಲ್ಲೋ ||

ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಚೆಲು ಬೆರಳಾಗಿ || ಎಲ್ಲೋ ||

ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಗಿರಣಗಳಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ || ಎಲ್ಲೋ ||

ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೇ
ಬನ್ನಿ ನನ್ನೆಡೆಗೆ ಲಾಸ್ಯವನಾಡಿರಿ
ಚಿಮ್ಮಲಿ ನಲವಿನ ಬುಗ್ಗೆಗಳೇ || ಎಲ್ಲೋ ||

ಸಾಹಿತ್ಯ –  ಜಿ. ಎಸ್. ಶಿವರುದ್ರಪ್ಪ
ಸಂಗೀತ –  ಎಸ್ ಸೋಮಸುಂದರಂ
ಗಾಯನ – ಕಸ್ತೂರಿ ಶಂಕರ್
 
download ello dooradi jinuguva hanigale
 
 

ಟ್ಯಾಗ್ ಗಳು: , , , , , , ,

ಯಾವ ರಾಗಕೊ ಏನೋ / yaava raagako eno

click to play

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್
 

download yaava raagako eno

 

ಟ್ಯಾಗ್ ಗಳು: , , , , , ,

ದೀಪವಿರದ ದಾರಿಯಲ್ಲಿ / deepavirada daariyalli

click to play

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್

download deepavirada daariyalli

 

ಟ್ಯಾಗ್ ಗಳು: , , , , , ,

ಸ್ತ್ರೀ ಎಂದರೆ ಅಷ್ಟೇ ಸಾಕೆ / stree endare ashte saake

click to play

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್

download stree endare ashte saake

 

ಟ್ಯಾಗ್ ಗಳು: , , , , , ,

ನೀನು ಮುಗಿಲು ನಾನು ನೆಲ / neenu mugilu naanu nela

click to play

ನೀನು ಮುಗಿಲು, ನಾನು ನೆಲ.
ನಿನ್ನ ಒಲವೆ ನನ್ನ ಬಲ.
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ.

ನಾನು ಎಳೆವೆ, ನೀನು ಮಣಿವೆ,
ನಾನು ಕರೆವೆ, ನೀನು ಸುರಿವೆ.
ನಮ್ಮಿಬ್ಬರ ಒಲುಮೆ ನಲುಮೆ ಜಗಕಾಯಿತು ಹುಣ್ಣಿಮೆ.
ನಾನಚಲದ ತುಟಿಯೆತ್ತುವೆ,
ನೀ ಮಳೆಯೊಲು ಮುತ್ತನಿಡುವೆ.
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ.

ಸೂರ್ಯ ಚಂದ್ರ ಚಿಕ್ಕೆಗಣ್ಣ,
ತೆರೆದು ನೀನು ಸುರಿವ ಬಣ್ಣ.
ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ.
ನೀನು ಗಂಡು, ನಾನು ಹೆಣ್ಣು,
ನೀನು ರೆಪ್ಪೆ, ನಾನು ಕಣ್ಣು.
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ.

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್

download neenu mugilu naanu nela

 

ಟ್ಯಾಗ್ ಗಳು: , , , , ,

ಕಾಣದ ಕಡಲಿಗೆ / kaanada kadalige

click to play

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು
ಸೇರಬಹುದೇ ನಾನು
ಕಡಲ ನೀಲಿಯೊಳು ಕರಗಬಹುದೇ ನಾನು

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್

download kaanada kadalige

 

ಟ್ಯಾಗ್ ಗಳು: , , , , ,