RSS

Category Archives: ಗೋಪಾಲಕೃಷ್ಣ ಅಡಿಗ

ಯಾವ ಮೋಹನ ಮುರಲಿ ಕರೆಯಿತು / yaava mohana murali

click to play

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು

ಸಾಹಿತ್ಯ – ಗೋಪಾಲಕೃಷ್ಣ ಅಡಿಗ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ರತ್ನಮಾಲ ಪ್ರಕಾಶ್

download yava mohana murali kareyito

 

ಟ್ಯಾಗ್ ಗಳು: , , , ,

ಇಂದು ಕೆಂದಾವರೆಯ / indu kendavareya

click to play

ಇಂದು ಕೆಂದಾವರೆಯ ದಳ
ದಳಿಸಿ ದಾರಿಯಲಿ ಗಂಧದೌತಣ
ಹೋಗಿ ಬರುವ ಜನಕೆ
ಮಂದ ಮಾರುತವಿರಲಿ ಮರಿ
ದುಂಬಿ ಇರಲಿ ಆನಂದವಿರೆ
ಅತಿಥಿಗಳ ಕರೆಯಬೇಕೆ || ಇಂದು ||

ನಗುತಲಿದೆ ನೀರು ಹೊಂಬಿಸಿಲು
ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನದಾರಿಯಲಿ
ಸಪ್ತಾಷ್ವವೇರಿ ಬಹನು || ಇಂದು ||

ತನ್ನ ಕೈ ಕೈಯೊಳು
ಒಲವು ಬಲೆಗಳನಿಟ್ಟು
ನೀರಿನಾಳದೊಲವನು ಬಿಂಬಿಸುವನು
ಮೈ ಮರೆತುದಾ ಪದ್ಮ
ಪರಮೇಗಳಾ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ || ಇಂದು ||

ಇರುವ ದುಂಬಿಯ ಬಿಟ್ಟು
ಬರುವ ನೇಸರ ಕರೆಗೆ
ಓಗುಟ್ಟುದೆನ್ನ ಕೆಂದಾವರೆ
ಬರುವ ಬಾಳಿನ ಕನಸು
ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ || ಇಂದು ||

ಸಾಹಿತ್ಯ – ಎಂ.ಗೋಪಾಲಕೃಷ್ಣ ಅಡಿಗ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಮಂಜುಳಾ ಗುರುರಾಜ್

download indu kendavareya

 

ಟ್ಯಾಗ್ ಗಳು: , , , , ,

ಮೌನ ತಬ್ಬಿತು ನೆಲವ / mouna tabbitu nelava

ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

ಸಾಹಿತ್ಯ – ಗೋಪಾಲ ಕೃಷ್ಣ ಅಡಿಗ
ಸಂಗೀತ / ಗಾಯನ – ಸಿ ಅಶ್ವಥ್

download mouna tabbitu nelava

 

ಟ್ಯಾಗ್ ಗಳು: , , , , , ,

ಅಳುವ ಕಡಲೊಳು ತೇಲಿ ಬರುತಲಿದೆ / Aluva Kadalolu teli

click to play

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಣಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ

ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲೂ ಕಂಡೀತು ಏಕಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಎತ್ತರೆತ್ತರೆಕೆ ಏರುವ ಮನಕೂ ಕೆಸರ ಲೇಪ, ಲೇಪ;
ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ !

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ

ಸಾಹಿತ್ಯ – ಗೋಪಾಲಕೃಷ್ಣ ಅಡಿಗ
ಸಂಗೀತ / ಗಾಯನ – ಶಿವಮೊಗ್ಗ ಸುಬ್ಬಣ್ಣ

download aluva kadalolu teli barutalide

 

ಟ್ಯಾಗ್ ಗಳು: , , , , ,