RSS

Category Archives: ದ ರಾ ಬೇಂದ್ರೆ

ಇಳಿದು ಬಾ ತಾಯಿ ಇಳಿದು ಬಾ / ilidu baa taayi ilidu baa

click to play

ಇಳಿದು ಬಾ ತಾಯಿ
ಇಳಿದು ಬಾ ।।
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಬಾರೆ
ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ।।

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ ।।

ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ ।।
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ ।।

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ ।।

ನಿನ್ನ ಕಂದನ್ನ ಹುಡುಕಿ ಬಾ ।।
ಹುಡುಕಿ ಬಾ ತಾಯಿ
ದುಡುಕಿ ಬಾ.
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
।।

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
।।

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ / ಗಾಯನ – ಪಿ.ಕಾಳಿಂಗ ರಾವ್

download ilidu baa taayi ilidu baa

 

ಟ್ಯಾಗ್ ಗಳು: , , , , , ,

ಬದುಕು ಮಾಯೆಯ ಮಾಟ / baduku maayeya maata

click to play

ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ!
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ / ಗಾಯನ – ಸಿ ಅಶ್ವಥ್

download baduku maayeya maata

 

ಟ್ಯಾಗ್ ಗಳು: , , , , ,

ಮುಗಿಲ ಮಾರಿಗೆ ರಾಗರತಿಯ / mugila maarige raagaratiya

click to play

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ

ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ

ಸಾಹಿತ್ಯ – ದ. ರಾ. ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download mugila maarige raaga ratiya

 

ಟ್ಯಾಗ್ ಗಳು: , , , , , ,

ಘಮ ಘಮ ಘಮಾಡಿಸ್ತಾವ ಮಲ್ಲಿಗೆ / ghama ghama ghamaadistaava

click to play

ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ

ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತ್ತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನನಗ ಇದರ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download ghama ghama ghamaadistaava mallige

 

ಟ್ಯಾಗ್ ಗಳು: , , , , ,

ಶ್ರಾವಣ ಬಂತು ಕಾಡಿಗೆ / shraavana bantu kaadige

click to play

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||

ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಸಾಹಿತ್ಯ – ದ. ರಾ. ಬೇಂದ್ರೆ
ಸಂಗೀತ / ಗಾಯನ – ಸಿ ಅಶ್ವಥ್ ಮತ್ತು ಸಂಗಡಿಗರು

download shraavana bantu kaadige

 

ಟ್ಯಾಗ್ ಗಳು: , , , ,

ಕುರುಡು ಕಾಂಚಾಣ / kurudu kaanchaana

click to play

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಡಲಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

ಸಾಹಿತ್ಯ –ದ.ರಾ. ಬೇಂದ್ರೆ
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ / ಯಶವಂತ ಹಳಿಬಂಡಿ

download kurudu kaanchaana

 

ನಾರಿ ನಿನ್ನ ಮಾರಿ ಮ್ಯಾಗ / naari ninna maari myaaga

click to play

ನಾರಿ ನಿನ್ನ ಮಾರಿ ಮ್ಯಾಗ
ನಗೀ ನವಿಲು ಆಡತಿತ್ತ
ಆಡತಿತ್ತ ಓಡತಿತ್ತ
ಮುಗಿಲ ಕಡೆಗೆ ನೋಡತಿತ್ತ |

ಮಿಣ ಮಿಣ ಮಿಣ ಮಿಂಚತಿತ್ತ
ಮೂಡತಿತ್ತ ಮುಳುಗತಿತ್ತ
ಮುಳುಗತಿತ್ತ ತೊಳಗತಿತ್ತ
ನೆಲ ಜಲ ಬೆಳಗತಿತ್ತ |

ಕಣ್ಣಿನ್ಯಾಗ ಬಣ್ಣದ ನೋಟ
ತಕತಕ ಕುಣಿದಾಡತಿತ್ತ
ಕುಣಿತಿತ್ತ ಮಣಿತಿತ್ತ
ಒನಪಿನಲೆ ಒನದಾಡತಿತ್ತ |

ಮನದ ಮಾಮರದ ಕೊನಿಗೆ
ಕೋಕಿಲೊಂದು ಕೂಡತಿತ್ತ
ಕೂಡತಿತ್ತ ಹಾಡಬಿಟ್ಟು
ಬರೇ ನಿನ್ನ ನೋಡತಿತ್ತ |

ಒಂದು ಜೀವ ನೊಂದುಕೊಂಡು
ಹಗಲಿರುಳು ಮಿಡುಕಾಡುತಿತ್ತ
ಮಿಡುಕುತಿತ್ತ ತೊಡಕತಿತ್ತ
ಏನೋ ಒಂದ ಹುಡುಕತಿತ್ತ |

ಕಣ್ಣೀರಿನ ಮಳೆಯ ಕೂಡ
ತನ್ನ ದುಃಖ ತೋಡತಿತ್ತ
ತೋಡತಿತ್ತ ಬೇಡತಿತ್ತ
ದೊರಕದ್ದಕ್ಕ ಬಾಡತಿತ್ತ

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ – ಗುಣಸಿಂಗ್
ಗಾಯನ – ಮೈಸೂರು ಅನಂತಸ್ವಾಮಿ

download naari ninna maari myaaga

 

ಒಂದೇ ಬಾರಿ ನನ್ನ ನೋಡಿ / onde baari nanna nodi

click to play

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!

ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗುವಂದ (೨)
ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||

ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ (೨)
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||

ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ (೨)
ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!

ಸಾಹಿತ್ಯ – ದ.ರಾ. ಬೇಂದ್ರೆ
ಸಂಗೀತ – ಸಿ ಅಶ್ವಥ್
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download onde baari nanna nodi

 

ಟ್ಯಾಗ್ ಗಳು: , , , , ,

ನೀ ಹೀಂಗ ನೋಡಬ್ಯಾಡ ನನ್ನ / Nee heenga nodabyada nanna

click to play

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ||ಪ||

ಸಂಸಾರ ಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ?
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿಯ ರೀತಿ
ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತ ಹಗಲ !

ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚು ನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿ ಕಚ್ಚಿ ಹಿಡಿಯದಿರು ಬಿಕ್ಕ.

ಸಾಹಿತ್ಯ – ಡಾ.ದ.ರಾ.ಬೇಂದ್ರೆ
ಸಂಗೀತ / ಗಾಯನ – ಸಿ ಅಶ್ವಥ್

download nee heenga noda byada

 

ಟ್ಯಾಗ್ ಗಳು: , , , , ,

ನಾಕುತಂತಿ / Naku Tanti

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

(ಭಾಗ-೩)

’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’

(ಭಾಗ-೪)

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಸಾಹಿತ್ಯ – ದ.ರಾ.ಬೇಂದ್ರೆ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download naku tanti

 

ಟ್ಯಾಗ್ ಗಳು: , , , , , ,